Karnataka Chalanachitra Academy

ಅಧ್ಯಕ್ಷರ ನುಡಿ

ಕರ್ನಾಟಕದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನನ್ನಾಗಿ ನನ್ನನ್ನು ರಾಜ್ಯ ಸರ್ಕಾರ ನೇಮಿಸಿದ್ದು ಒಂದು ರೀತಿಯಲ್ಲಿ ನನಗೆ ಹೊಸ ವರ್ಷದ ಉಡುಗೊರೆ ಕೂಡ ಹೌದು! ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ನನ್ನ ಕೈ ಸೇರಿದ್ದು ೨೦೨೦ರ ಜನವರಿ ಮೊದಲನೇ ತಾರೀಖಿನಂದು. ನಾನು ಇಷ್ಟ ಪಡುವ, ಕನಸುಗಳನ್ನು ಕಂಡ, ವೃತ್ತಿಯನ್ನಾಗಿ ಸ್ವೀಕರಿಸಿದ ಕ್ಷೇತ್ರಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯವೇ ಸರಿ.

 ನಿಗದಿಯಾಗಿದ್ದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ನಡೆಸುವುದು. ಉಳಿದಿದ್ದು ಕೇವಲ ೪೮ ದಿನಗಳು. ಇಷ್ಟೇ ಕಾಲಾವಧಿಯಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ನಡೆಸಬೇಕಾಗಿ ಬಂದಿದ್ದು ನನ್ನ ಜೀವನದಲ್ಲಿ ಎದುರಿಸಿದ ಬಹು ದೊಡ್ಡ ಸವಾಲು. ಇದನ್ನು ಎದುರಿಸಿ ಯಶಸ್ವಿಯಾಗಲೇಬೇಕು ಎಂದು ನಾನು ಮಾನಸಿಕವಾಗಿ ಗಟ್ಟಿಯಾದೆ. ಪ್ರತಿ ನಿಮಿಷವೂ ಅಮೂಲ್ಯ ಎಂದು ಭಾವಿಸಿ ಕಾರ್ಯಸನ್ನದ್ದನಾದೆ.

ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಎನ್.ವಿದ್ಯಾಶಂಕರ್ ಅವರು ಸಾಕಷ್ಟು ಸಿದ್ದತೆ ಮಾಡಿದ್ದು ನನಗೆ ನೆರವು ನೀಡಿತು. ಮುಂದೆ ಕೂಡ ಅವರ ಬೆಂಬಲ ಮತ್ತು ಸಹಯೋಗ ಚಿತ್ರೋತ್ಸವದ ಯಶಸ್ಸಿಗೆ ಕಾರಣವಾಯಿತು. ನನ್ನ ಈ ಕೆಲಸಗಳಿಗೆ ಚಿತ್ರರಂಗ, ವಾಣಿಜ್ಯ ಮಂಡಳಿ, ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ಟಿ.ವಿ.ಅಸೋಸಿಯೇಷನ್, ಕಾರ್ಮಿಕರ ಒಕ್ಕೂಟದವರು ಕೊಟ್ಟ ಬೆಂಬಲ ಬಹಳ ದೊಡ್ಡದು. ನನ್ನ ಈ ಕೆಲಸಗಳಿಗೆ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ರಿಜಿಸ್ಟಾçರ್ ಮತ್ತು ಸಿಬ್ಬಂದಿ ವರ್ಗದವರು ನೀಡಿದ ಕೊಡುಗೆ ಬಹಳ ಮುಖ್ಯವಾದದ್ದು ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರನ್ನೂ ಹೃತ್ಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇನೆ.

ಅದೇ ರೀತಿ ಪದಗ್ರಹಣವಾದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನನ್ನ ಕನಸಿನ ಚಿತ್ರರಂಗಕ್ಕೆ ಈಗ ದೊರೆತಿರುವ ಅಧಿಕಾರ ಅನುಕೂಲತೆಗಳನ್ನು ಬಳಸಿಕೊಂಡು ಏನೇನೆಲ್ಲ ಮಾಡಬಹುದು ಎಂದು ಚಿಂತಿಸುತ್ತಲೇ ಇದ್ದೇನೆ. ಸಮಾನ ಮನಸ್ಕರೊಂದಿಗೆ ಚರ್ಚಿಸುತ್ತಲೇ ಇದ್ದೇನೆ. ಅತಿ ಶೀಘ್ರವಾಗಿ ಆಗಬಲ್ಲಂಥಹುದನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಜೊತೆಗೆ…
ಈ ೧೯ ತಿಂಗಳ ಯಾನದಲ್ಲಿ ಆಗಿರುವ ಮಹತ್ತರ ಕೆಲಸಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಉಳಿದ ನನ್ನ ಕನಸಿನ ಯೋಜನೆಗಳನ್ನು ನಿಮ್ಮ ಮುಂದೆ ಹರವಿ ಹಂಚಿಕೊಳ್ಳಲು ಬಯಸಿದ್ದೇನೆ. ಕೆಲವೇ ದಿನಗಳ ಈ ಸೀಮಿತ ಅಧಿಕಾರದ ಅವಧಿಯಲ್ಲಿ ನಾನು ನಡೆದುಬಂದ ದಾರಿಯನ್ನು ಒಮ್ಮೆ ತಿರುಗಿ ನೋಡಿ ಮುಂದಿನ ದಾರಿ ಕೂಡಾ ನಿಮ್ಮೊಂದಿಗೆ ಚರ್ಚಿಸಿ ಹಂಚಿಕೊಂಡು ಮುಂದುವರೆಯಬೇಕು ಎಂದಿದ್ದೇನೆ. ಸಹೃದಯರಾದ ತಾವು ಎಲ್ಲರೂ ಈ ಪಯಣದಲ್ಲಿ ಸೂಕ್ತ ಮಾರ್ಗದರ್ಶಕರಾಗಿ ಮತ್ತು ಸಹಭಾಗಿಗಳಾಗಿ ಸಹಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.
ಜೈ ಭುವನೇಶ್ವರಿ… ಜೈ ಕರ್ನಾಟಕ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

ಸುನೀಲ್ ಪುರಾಣಿಕ್
ಅಧ್ಯಕ್ಷರು
ಕರ್ನಾಟಕ ಚಲನಚಿತ್ರ ಅಕಾಡೆಮಿ

en_USEnglish